ರೇಡಿಯಮ್
ಆವರ್ತಕೋಷ್ಟಕದ 2ಎ ಗುಂಪಿನ 7ನೆಯ ಆವರ್ತದ ಕ್ಷಾರಲೋಹೀಯ ಭಸ್ಮಧಾತು.  ಪ್ರತೀಕ Ra. ರಾಸಾಯನಿಕವಾಗಿಯೂ ಪಟುವಾಗಿರುವ ಬೆಳ್ಳಿಬಿಳುಪಿನ ವಿಕಿರಣಪಟು ಲೋಹ. ಪರಮಾಣು ಸಂಖ್ಯೆ 88. ಪರಮಾಣು ತೂಕ 226. ದ್ರವನಬಿಂದು 697o ಸೆ. ಕುದಿಬಿಂದು 11370 ಸೆ. ಸಾಪೇಕ್ಷ ಸಾಂದ್ರತೆ 5. ಎಲೆಕ್ಟ್ರಾನ್ ವಿನ್ಯಾಸ 1s2 2s2 2ಠಿ6 3s2 3ಠಿ6 3ಜ10 4s2 4ಠಿ6 4ಜ10 4ಜಿ14 5s2 5ಠಿ6 5ಜ10 6s2 6ಠಿ6  7s2. ವೇಲೆನ್ಸಿ 0, +2. ನಾಲ್ಕು ನೈಸರ್ಗಿಕ ವಿಕಿರಣಪಟು ಸಮಸ್ಥಾನಿಗಳಿವೆ. ಬೈಜಿಕ ಕ್ರಿಯೆ ಮುಖೇನ ಇನ್ನೂ 9 ಸಮಸ್ಥಾನಿಗಳು ಲಭ್ಯ. ಇವುಗಳ ಪೈಕಿ ವಿಕಿರಣಪಟು ರೇಡಿಯಮ್-226 ಬಲು ಮುಖ್ಯವಾದದ್ದು (ಅರ್ಧಾಯು 1620 ವರ್ಷ). 

ಇದು ಯುರೇನಿಯಮಿನ ವಿಕಿರಣಪಟು ಕ್ಷಯದಿಂದ ರೂಪುಗೊಳ್ಳುವ ಧಾತು. ಎಂದೇ, ಅತ್ಯಲ್ಪ ಪ್ರಮಾಣ ದಲ್ಲಿ ಯುರೇನಿಯಮ್ ಧಾತುವಿನ ಖನಿಜಗಳಲ್ಲಿ ಲಭ್ಯ. ಪಿಚ್‍ಬ್ಲೆಂಡ್ (1 ಟನ್ ಅದುರಿನಲ್ಲಿ 0.4 ಗ್ರಾಮ್ ರೇಡಿಯಮ್) ಮತ್ತು  ಕಾರ್ನೊಟೈಟ್ ಪ್ರಮುಖ  ಅದುರುಗಳು. ಮೇರಿ  ಕ್ಯೂರಿ (1867-1934) ಮತ್ತು ಪಿಯರಿ ಕ್ಯೂರಿ 
(1859-1906) ಎಂಬ ಫ್ರೆಂಚ್ ರಸಾಯನವಿಜ್ಞಾನಿ ದಂಪತಿಗಳಿಂದ ಆವಿಷ್ಕಾರ(1898). ಆಮ್ಲ ಅವಿಲೇಯ ಶೇಷವಾಗಿ ಸಲ್ಫೇಟುಗಳ ರೂಪದಲ್ಲಿ ಬೇರಿಯಮಿನೊಂದಿಗೆ ರೇಡಿಯಮನ್ನು ಅದುರಿನಿಂದ ಆಹರಿಸುತ್ತಾರೆ.

ರೇಡಿಯಮ್ ವಾಯುವಿನಿಂದ ಬಲು ವೇಗವಾಗಿ ಉತ್ಕರ್ಷಿತವಾಗಿ ಕಪ್ಪಾಗುತ್ತದೆ. ಎಂದೇ, ರೇಡಿಯಮ್ ಕ್ಲೋರೈಡ್ ಅಥವಾ ರೇಡಿಯಮ್ ಬ್ರೋಮೈಡ್ ರೂಪದಲ್ಲಿ ಮಾತ್ರ ಬಳಕೆ. ರಾಸಾಯನಿಕ ಗುಣಗಳಲ್ಲಿ ಬೇರಿಯಮ್ ಧಾತುವಿಗೂ ರೇಡಿಯಮ್ ಧಾತುವಿಗೂ ಬಲು ಸಾಮ್ಯವಿದೆ. ನೀರಿನೊಂದಿಗೆ ಸುಲಭವಾಗಿ ವರ್ತಿಸುತ್ತದೆ; ಹೈಡ್ರೊಜನ್ ಮತ್ತು ಹೈಡ್ರಾಕ್ಸೈಡ್ ದ್ರಾವಣ ಉತ್ಪನ್ನಗಳು. ಎಲುಬುಗಳಲ್ಲಿ ಕ್ಯಾಲ್ಸಿಯಮಿನ ಬದಲು ರೇಡಿಯಮ್ ಸಂಚಯಿಸಬಲ್ಲದು. ತನ್ಮೂಲದ ದೀರ್ಘಕಾಲೀನ ವಿಕಿರಣನದ ಪರಿಣಾಮವೇ ರಕ್ತಹೀನತೆ ಮತ್ತು ಕ್ಯಾನ್ಸರ್ (ಸಹಿಷ್ಣುತಾ ಮಿತ 1 ಮಿಲಿಗ್ರಾಮ್).  ರೇಡಾನ್  ಅನಿಲಧಾತು ರೇಡಿಯಮಿನ  ವಿಕಿರಣಕ್ಷಯದ ಉತ್ಪನ್ನ.

ರೇಡಿಯಮಿನ ನಿಯಂತ್ರಿತ ವಿಕಿರಣವನ್ನು ಕ್ಯಾನ್ಸರ್ ಕೋಶಗಳ ನಾಶಕ್ಕೆ ಬಳಸುವುದುಂಟು. ಔದ್ಯಮಿಕ ರೇಡಿಯೊರೇಖನದಲ್ಲಿ (ರೇಡಿಯೊಗ್ರಫಿ) ರೇಡಿಯಮ್ ಸಲ್ಫೇಟ್ ಬಳಕೆ ಇದೆ. ಸಂಶೋಧನೆ ಹಾಗೂ ನ್ಯೂಟ್ರಾನ್ ಪಟುಕರಣದಿಂದ ಪದಾರ್ಥ ವಿಶ್ಲೇಷಣೆಯಲ್ಲಿ ನ್ಯೂಟ್ರಾನ್ ಆಕರವಾಗಿಯೂ ಬಳಕೆ ಉಂಟು. ದೀಪ್ತಿಶೀಲ ಬಣ್ಣಗಳ ತಯಾರಿಯಲ್ಲಿ ಬಳಕೆ ಇತ್ತು.	
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ